Friday, August 5, 2016

Indian Industry post liberalisation 1991-2016

My article in Prajavani on developments in Indian Industry in the last 25 years post-liberalisation 

Prajavani August 5, 2016
http://epaper.prajavani.net/pv_fs/080516/stories/pv_b5_all_gc05_pg09_Story_2.jpg

ಆರ್ಥಿಕ ಸುಧಾರಣೆಗೆ 25

ಲೈಸನ್ಸ್ ರಾಜ್‌ನಿಂದ ಜಾಗತಿಕ ಮಾರುಕಟ್ಟೆ ಸವಾಲುಗಳ ಕಡೆಗೆ

ಶಿವಾನಂದ ಕಣವಿ
  
ಕಳೆದ 25 ವರುಷಗಳಲ್ಲಿ ಭಾರತೀಯ ಉದ್ದಿಮೆಯ ಚಹರೆ ಪೂರ್ತಿ ಬದಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಆದ ಪ್ರಗತಿ ಯಾರನ್ನಾದರೂ ಬೆರಗುಗೊಳಿಸುವಂತಿದೆ. 1991ರಲ್ಲಿ ಸುಮಾರು 10 ಕೋಟಿ ಡಾಲರ್ ನಿರ್ಯಾತ ಮಾಡಿದ ನಮ್ಮ ಮಾಹಿತಿ ತಂತ್ರಜ್ಞಾನದ ಉದ್ದಿಮೆಗಳು ಕಳೆದ ವರುಷ 10 ಸಾವಿರ ಕೋಟಿ ಡಾಲರ್ ನಿರ್ಯಾತದಿಂದ ಗಳಿಸಿದವು ಅಂದರೆ ಸಾವಿರ ಪಟ್ಟಿನ ಅಗಾಧ ಬೆಳವಣಿಗೆ.
ನಮ್ಮ ಐಟಿ ಕಂಪನಿಗಳು ಬಹು ರಾಷ್ಟ್ರೀಯವಾಗಿದ್ದು ಜಗತ್ತಿನ ಅತಿ ದೊಡ್ಡ ಮತ್ತು ಉತ್ತಮ ಕಂಪನಿಗಳೊಡನೆ ಸರಿ ಸಾಟಿಯಾಗಿ ಇಂದು ನಿಂತಿವೆ. ನಮ್ಮ ವಾಹನ ಉತ್ಪಾದಕರು 91ರಲ್ಲಿ ಒಟ್ಟಾರೆ ಒಂದು ಲಕ್ಷ ಕಾರು ತಯಾರಿಸುತ್ತಿದ್ದವು. ಅವು ಕಳೆದ ವರುಷ 25 ಲಕ್ಷ ಕಾರು ಉತ್ಪಾದಿಸಿದವು. ಇಷ್ಟೇ ಅಲ್ಲದೆ ಹಲವು ಭಾರತೀಯ ಮತ್ತು ವಿದೇಶೀ ಕಂಪನಿಗಳು ಭಾರತದಲ್ಲೇ ಹೊಸ ವಾಹನಗಳ ವಿನ್ಯಾಸವನ್ನೂ ಮಾಡುತ್ತಿದ್ದಾರೆ. ಇಂದು ಜಗತ್ತಿನ ಅತಿ ದೊಡ್ಡ ಸ್ಕೂಟರ್ ಮೋಟರ್ ಸೈಕಲ್ ಮತ್ತು ಟ್ರ್ಯಾಕ್ಟರ್ ಕಂಪನಿಗಳು ಭಾರತೀಯ.
ಸಂವಹನ ಕ್ರಾಂತಿಯಂತೂ ಎಲ್ಲರ ಕಣ್ಣು ಮುಂದಿದೆ. 91ರಲ್ಲಿ .25 ಕೋಟಿ ಟೆಲಿಫೋನ್ ಇದ್ದರೆ ಈಗ 5 ಕೋಟಿಗೂ ಹೆಚ್ಚು ಟೆಲಿಫೋನ್ ಮತ್ತು 100 ಕೋಟಿಗೂ ಹೆಚ್ಚು ಮೊಬೈಲ್ ಇವೆ. 25 ವರುಷಗಳ ಹಿಂದೆ ಕೇವಲ ರೋಹಿಣಿ ಉಪಗ್ರಹವನ್ನು ಹಾರಿಸಿದ ಇಸ್ರೋ ಇಂದು ಸುಮಾರು 130 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳಿಸಿದೆ.
ಅದರಲ್ಲಿ ಸುಮಾರು 50 ಉಪಗ್ರಹಗಳನ್ನು ಹೊರ ದೇಶಗಳಿಗಾಗಿ! ಅದೇ ರೀತಿ ಇನ್ನೊಂದು ಹೈಟೆಕ್ ಕ್ಷೇತ್ರವಾದ ಅಣು ಶಕ್ತಿಯಲ್ಲಿ ರಕ್ಷಣೆಗಾಗಿ ಅಣುಬಾಂಬುಸಬ್ ಮರೀನ್ಪೃಥ್ವಿಅಗ್ನಿ ಮುಂತಾದ ಕ್ಷಿಪಣಿ ಅಸ್ತ್ರಗಳು ಅಷ್ಟೇ ಅಲ್ಲದೆ 220, 540 ಮತ್ತು 700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಕ ರಿಯಾಕ್ಟರ್ ಮತ್ತು ಹೊಚ್ಚ ಹೊಸ ತಲೆಮಾರಿನ ಫಾಸ್ಟ್ ಬ್ರೀಡರ್‌ಗಳನ್ನೂ ಸ್ಥಾಪಿಸುವ ಸಾಮರ್ಥ್ಯಗಳಿಸಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅಂತರಿಕ್ಷ ಮತ್ತು ಅಣುಶಕ್ತಿಯ ಕ್ಷೇತ್ರಗಳಲ್ಲಿ ನಮ್ಮ ಉದ್ದಿಮೆಗಳೇ ಎಲ್ಲ ಬಿಡಿ  ಭಾಗಗಳನ್ನೂ ಕಟ್ಟು ನಿಟ್ಟಾದ ಜಾಗತಿಕ ಗುಣಮಟ್ಟಕ್ಕೆ ಸರಿಯಾಗಿ ಉತ್ಪಾದಿಸಿ ಕೊಡುವ ಸಾಮರ್ಥ್ಯ ಹೊಂದಿವೆ.
ಈಗ ಪೆಟ್ರೊಕೆಮಿಕಲ್ಫಾರ್ಮಾಪಾಲಿಯೆಸ್ಟರ್ಪ್ಲಾಸ್ಟಿಕ್ತೈಲ ಶುದ್ಧೀಕರಣಯೂರಿಯಕೀಟನಾಶಕ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಭಾರತೀಯ ಉದ್ದಿಮೆಗಳು ಜಾಗತಿಕ ಖ್ಯಾತಿ ಪಡೆದಿವೆ. ಐಟಿ ಕ್ಷೇತ್ರದಷ್ಟೆ ಇಂದಿನ ಭಾರತೀಯ ಕಂಪನಿಗಳು ಜೆನೆರಿಕ್ ಔಷಧಗಳಲ್ಲಿ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸುತ್ತಿವೆ. ಅನೇಕ ಜಾಗತಿಕ ಮಹಾಮಾರಿಗಳ ಸಂದರ್ಭಗಳಲ್ಲಿ: ಏಡ್ಸ್ಅಂಥ್ರಾಕ್ಸ್‌ನಂಥ ಸಂದರ್ಭಗಳಲ್ಲಿ ಭಾರತೀಯ ಕಂಪೆನಿಗಳ ಉತ್ಪನ್ನಗಳನ್ನು ಬಳಸಲಾಗುತ್ತಿದೆ.
ಆಗಾಗ ನಾವು "ಆದರೆ ನಮ್ಮಲ್ಲಿ ಎಲೆಕ್ಟ್ರಾನಿಕ್ ಹಾರ್ಡವೇರ್ ಉತ್ಪಾದನೆ ಇಲ್ಲವಲ್ಲ. ಚೀನ ಮತ್ತು ಪೂರ್ವ ಏಷ್ಯಾ ದೇಶಗಳು ಈ ಕ್ಷೇತ್ರದಲ್ಲಿ ಬಹಳ ಮುಂದೆ ಹೋಗಿವೆಯಲ್ಲ !" ಎಂದು ವಿಷಾದಿಸುವದುಂಟು. ಆದರೆ ಈ ಶತಮಾನದ ಪರಿಸ್ಥಿತಿ ಈಗ ಬಹಳಷ್ಟು ಬದಲಾಗಿದೆ ಅಮೇರಿಕದ ಚಿಪ್ ಉದ್ದಿಮೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಈಗ ಚಿಪ್‌ಗಳ ಮೌಲ್ಯದ ಶೇಕಡಾ 80ರಷ್ಟು ಅವುಗಳ ವಿನ್ಯಾಸ ಮತ್ತು ಪರೀಕ್ಷಾ ತಂತ್ರಜ್ಞಾನ ಳಲ್ಲಿ ಅಡಗಿದೆ. ಚಿಪ್ ಫ್ಯಾಕ್ಟರಿಗಳ ಪಾಲು ಶೇಕಡಾ 20 ಮಾತ್ರ.
ಈಗ ಭಾರತೀಯ ಎಂಜಿನಿಯರ್‌ಗಳು ಬೆಂಗಳೂರುಪುಣೆಹೈದರಾಬಾದ್ಗುರುಗ್ರಾಮ ಮುಂತಾದ ಪಟ್ಟಣಗಳಲ್ಲಿ ಕುಳಿತು ವಿಶ್ವದ ಮುಂಚೂಣಿ ಚಿಪ್‌ಗಳ ವಿನ್ಯಾಸ ಮತ್ತು ಪರೀಕ್ಷೆ ಮಾಡಬಲ್ಲರು. ಬಹಳ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ಈ ಚಿಪ್ ವಿನ್ಯಾಸ ತಂತ್ರಜ್ಞಾನಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು ಸಿಲಿಕಾನ್ ಕಣಿವೆಯ ಭಾರತೀಯರಾದ ಪ್ರಭುಗೋಯಲ್ಸುಹಾಸ ಪಾಟೀಲರಾಜೀವ ಮಾಧವನ್ಪ್ರಕಾಶ ಭಾಲೆರಾವ್ರಾಜವೀರ ಸಿಂಗ್ ಮುಂತಾದವರು.
ಇನ್ನೊಂದು ವಿಶೇಷವೆಂದರೆ ಈ ಕಳೆದ 25 ವರುಷಗಳಲ್ಲಿ ನಮ್ಮ ಹಣಕಾಸು ವ್ಯವಸ್ಥೆಯ ಬುನಾದಿಯಾದ ಬ್ಯಾಂಕುಷೇರು ಮಾರುಕಟ್ಟೆವಿವಿಧ ಸಾಮಾನು ಸರಂಜಾಮು ಮಾರುಕಟ್ಟೆಗಳು ಅತ್ಯಾಧುನಿಕ ತಂತ್ರಜ್ಞಾನದ ಆಧಾರದ ಮೇಲೆ ನಿಂತಿವೆ ಮತ್ತು ಹಲವಾರು ಮುಂದುವರೆದ ದೇಶ
ಗಳಿಗೂ ಮಾದರಿಯಾಗಿವೆ. ಇನ್ನು ಜನ ಧನ್ಆಧಾರ್ಮೋಬೈಲ್‌ಗಳ ಮೇಲೆ ನಿಂತ ಹೊಸ ಕ್ರಾಂತಿಕಾರೀ ಹಣಕಾಸಿನ ವ್ಯವಸ್ಥೆಗಳ ರೂಪ ರೇಷೆ ತಯಾರಾಗುತ್ತಿದೆ.
ಹಲವು ಕ್ಷೇತ್ರಗಳಲ್ಲಿ ಭಾರತೀಯ ಕಂಪನಿಗಳು ಜಗತ್ತಿನ ಪ್ರಥಮ ಐದು ಕಂಪೆನಿಗಳ ಪಟ್ಟಿಯಲ್ಲಿ ಸ್ಥಾನಗಳಿಸಿವೆ. ಕೆಲವು ಭಾರತೀಯ ಕಂಪನಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಹೊರ ದೇಶಗಳಿಗೂ ವಿಸ್ತರಿಸಿ ಟೆಲಿಕಾಮ್ಸ್ಟೀಲ್ಅಲ್ಯುಮಿನಿಯಮ್ಆಟೊಮೋಬೈಲ್ಐಟಿ ಮುಂತಾದ ವ್ಯವಹಾರಗಳಲ್ಲಿ ತೊಡಗಿವೆ. ಇದಲ್ಲದೆ ಹೊರ ದೇಶಗಳಲ್ಲಿ ನಷ್ಟ ಅನುಭವಿಸಿದ ಅಥವಾ ದಿವಾಳಿಯ ಹಂತದಲ್ಲಿದ್ದ ಹಲವು ಉದ್ದಿಮೆಗಳನ್ನು ಖರೀದಿಸಿ ಅವುಗಳನ್ನು ಲಾಭಕರವಾಗಿ ನಡೆಸುತ್ತ ತಮ್ಮ ಉತ್ತಮ ಉಸ್ತುವಾರಿ ಕೌಶಲ್ಯವನ್ನು ಪ್ರದರ್ಶಿಸಿವೆ.
ಕಳೆದ 25 ವರುಷಗಳ ಅಗಾಧ ಬೆಳವಣಿಗೆಗಳನ್ನು ನೋಡಿ ನಾವು ನಮ್ಮ ಸಮತೋಲವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಈ ಕಥೆಯನ್ನು ಅನಿವಾರ್ಯವಾಗಿ ಮೊಟಕುಗೊಳಿಸಿ ಈ ಪರಿವರ್ತನೆಯ ವಿಶೇಷಲಕ್ಷಣಗಳನ್ನೂ ಮತ್ತು ಕೆಲನಿಮಿತ್ತ ಕಾರಣಗಳನ್ನೂ ಪರಿಶೀಲಿಸೋಣ.
ಹೊಸ ಆರ್ಥಿಕ ನೀತಿಯ ಆರಂಭಕ್ಕೆ ಮೊದಲಿನ 25 ವರ್ಷಗಳು ಅಂದರೆ 1966ರಿಂದ 1991ರ ವರೆಗಿನ 25ವರುಷಗಳ ಔದ್ಯೋಗಿಕ ಬೆಳವಣಿಗೆಗಳೆಡೆಗೆ ಸ್ವಲ್ಪ ಲಕ್ಷ್ಯ ಹರಿಸದೇ ಇದ್ದರೆ ಈಗಿನ ಬೆಳವಣಿಗೆಗಳ ಪೂರ್ಣ ಚಿತ್ರ ದಕ್ಕಲಿಕ್ಕಿಲ್ಲ.
ಹೊಸ ಆರ್ಥಿಕ ನೀತಿ ಕಾರ್ಯರೂಪಕ್ಕೆ ಬರುವ ಹಿಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಕೈಗಾರಿಕಾಭಿವೃದ್ಧಿ ಆಗಲೇ ಇಲ್ಲವೇಖಂಡಿತವಾಗಿ ಆಗಿತ್ತು. ಬಟ್ಟೆ ಉದ್ಯಮದಲ್ಲಿ  ನೇಯುವನೂಲೆಳೆಯುವಬೇರೆ ಬೇರೆ ಚಿತ್ರಗಳನ್ನು ಪ್ರಿಂಟ್ ಮಾಡುವ ಅನೇಕ ತಂತ್ರಜ್ಞಾನಗಳು 80ರ ದಶಕದಲ್ಲಿ ಆಧುನೀಕರಣಗೊಂಡವು.
ಚಿಕ್ಕ ಉದ್ಯಮಗಳಾಗಿದ್ದ ಪವರ್ ಲೂಮ್‌ಗಳಿಗೆ ಏರ್ ಜೆಟ್ವಾಟರ್ ಜೆಟ್ ನೇಯುವ ಯಂತ್ರಗಳನ್ನು ಖರೀದಿಸಲು ಸಾಧ್ಯವಾಯಿತು. ಮುಂಬೈಕಾನ್ಪುರಅಹಮದಾಬಾದ್ ಮುಂತಾದೆಡೆಗಳಲ್ಲಿದ್ದ ನೂರಾರು ಬಟ್ಟೆ ಗಿರಣಿಗಳು ಮುಚ್ಚಿ ಹೋದದ್ದೂ  ಕಾರಣಕ್ಕಾಗಿ. ಆದರೆ ಬಟ್ಟೆ ಉತ್ಪಾದನೆ ಮಾತ್ರ ಇನ್ನೂ ಬೆಳೆಯಿತು. ಟೆಲಿಫೋನ್ ಸಂಪರ್ಕಗಳ ಸಂಖ್ಯೆ ಹಲವು ಲಕ್ಷದಿಂದ ೨.೫ ಕೋಟಿ ತಲುಪಿತು ಮತ್ತು ಅದಕ್ಕಿಂತ ಮುಖ್ಯವಾಗಿ ಸಿ-ಡಾಟ್ ಆವಿಷ್ಕರಿಸಿದ ಡಿಜಿಟಲ್ ಸ್ವಿಚ್ ಮೂಲಕ ಸಂವಹನ ಜಾಲದ ಡಿಜಿಟಲೀಕರಣ ಪ್ರಾರಂಭವಾಯಿತು.
ಎಸ್‌ಟಿಡಿ ಸೌಲಭ್ಯ ದೊರಕಿತು ಮತ್ತು ದೇಶದ ಮೂಲೆ ಮೂಲೆಗಳಲ್ಲಿ  ಸಾರ್ವಜನಿಕ ಎಸ್‌ಟಿಡಿ ಬೂತ್‌ಗಳು ಆರಂಭವಾದವು. ಹೈಟೆಕ್ ಉದ್ದಿಮೆಗಳಾದ ಅಂತರಿಕ್ಷ್ ಮತ್ತು ಅಣು ಶಕ್ತಿ ಕ್ಷೇತ್ರಗಳೂ ತಮ್ಮ ಬಾಲ್ಯಾವಸ್ಥೆಯನ್ನು ಕಳೆದು  ಸ್ವದೇಶಿ ಯತ್ನದ ಆಧಾರದ ಮೇಲೆ ಪ್ರೌಢತೆಯೆಡೆಗೆ ಕಾಲಿಟ್ಟವು.
ಐಟಿ ಉದ್ಯೋಗ ರೆಕ್ಕೆ ಪುಕ್ಕ ಬೆಳೆಸಿತು. ಟಿ.ಸಿ.ಎಸ್.ಸಿ.ಎಮ್.ಸಿ. ಗಳು ಪ್ರೌಢಾವಸ್ಥೆಗೆ ಬರತೊಡಗಿದರೆ ಇನ್ಫೋಸಿಸ್ವಿಪ್ರೋಎಚ್.ಸಿ.ಎಲ್. ನಂಥ ಹೊಸ ಕಂಪನಿಗಳೂ ಹುಟ್ಟಿದವು. ಎಲ್ಲಕ್ಕಿಂತ ಮೇಲಾಗಿ ಸಿ.ಎಮ್.ಸಿ. ಯ ಸತತ ಪ್ರಯತ್ನದಿಂದ ಮತ್ತು ಪರಿಶ್ರಮದಿಂದ ೮೦ರ ದಶಕದ ಕೊನೆಗೆ ರೈಲ್ವೇ ಟಿಕೇಟು ಮತ್ತು ಆರಕ್ಷಣೆಯ ಕಂಪ್ಯೂಟರೀಕರಣ ಆರಂಭವಾಯಿತು ಕೆಲವೇ ವರುಷಗಳಲ್ಲಿ ವಿಶ್ವದ ಅತ್ಯಂತ ದೊಡ್ಡ ಸಫ಼ಲ ಡಿಜಿಟಲ್ ಪ್ರಕಲ್ಪಎಂದು ಹೆಸರುವಾಸಿಯಾಯಿತು.
ಈ ಪ್ರಕಲ್ಪದ ಸಫ಼ಲತೆ ಸಾರ್ವಜನಿಕರಲ್ಲಿಕಾರ್ಮಿಕ ಸಂಘಗಳಲ್ಲಿ ಮತ್ತು ರಾಜಕಾರಣಿಗಳಲ್ಲಿ ಕಂಪೂಟರೀಕರಣದ ಬಗ್ಗೆ ಇದ್ದ ಹಿಂಜರಿಕೆಸಂಶಯಗಳನ್ನು ನಿವಾರಿಸಿತು ಮತ್ತು ಭಾರತದಲ್ಲಿ ಜನಸಾಮಾನ್ಯರಿಗಾಗಿ ಡಿಜಿಟಲ್ ಕ್ರಾಂತಿಯ ನಾಂದಿಯನ್ನು ಹಾಡಿತು ಎಂದರೆ ಉತ್ಪ್ರೇಕ್ಷೆ ಆಗಲಾರದು. ಅದೇ ರೀತಿ ಇದು ವರೆಗೆ ಸಣ್ಣ ಕಂಪ್ಯೂಟರ್ ಗಳ ವಿನ್ಯಾಸ ಮಾಡಬಲ್ಲವರಾಗಿದ್ದ ಭಾರತೀಯ ತಂತ್ರಜ್ಞರು ಫ಼್ಲೋಸಾಲ್ವರ್ಪರಮ್‌ನಂಥ ಸೂಪರ್ ಕಂಪ್ಯೂಟರ್ ಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿ ತೋರಿಸಿದರು.
ಜೆಮ್‌ಷೆಡ್‌ಪುರದಲ್ಲಿ ಟಾಟಾ ಸ್ಟೀಲ್‌ನಿಂದ ಆರಂಭವಾದ ಸ್ಟೀಲ್ ಉದ್ಯೋಗ ಭದ್ರಾವತಿ ಮತ್ತು ನಂತರ ರೂರ್ಕೇಲಾಭಿಲಾಯಿದುರ್ಗಾಪುರಬೊಕಾರೊದಂಥ ಉಕ್ಕು ಸಂಕೀರ್ಣಗಳೆಡೆ ನಡೆದಿತ್ತು. ಮಾರುತಿ-ಸುಜ಼ುಕಿಯ ಜಪಾನೀ ಮಾದರಿಗಳ ಆಗಮನದಿಂದ ಮತ್ತು ಬಜಾಜ್ಕೈನೆಟಿಕ್ ಹೊಂಡಾ ಇತ್ಯಾದಿ ಸ್ಕೂಟರ್ ಉದ್ಯೋಗಗಳ ಬೆಳವಣಿಗೆಯಿಂದ ಆಟೋಮೋಬೈಲ್ ಕ್ಷೇತ್ರದ ನಡಿಗೆಯಲ್ಲಿ ಒಂದು ಹೊಸ ಹುಮ್ಮಸ್ಸು ಬಂದಿತ್ತು. ಒಟ್ಟಾರೆಯಾಗಿ ಹೇಳುವುದಾದರೆ 80 ದಶಕದ ಬೆಳವಣಿಗೆಗಳು ಮುಂದಿನ 25 ವರುಷ ಕಾಲದ ಪರಿವರ್ತನೆಗೆ ಅನುವು ಮಾಡಿತ್ತು ಬುದನ್ನು ಕಡೆಗೆಣಿಸಲಾಗದು.
ಆದರೆ ಕಳೆದ 25 ವರುಷಗಳ ಸ್ಫೋಟದಂಥ ಬೆಳವಣಿಗೆಗೆ ನಿಮಿತ್ತವಾದ ಕಾರಣಗಳೆಂದರೆ ಉದಾರೀಕರಣ ಮತ್ತು ಜಾಗತೀಕರಣ. ಇವುಗಳಲ್ಲಿ ಭಾರತೀಯ ಉದ್ದಿಮೆಗಳು ಅನುಕೂಲ ಮತ್ತು ಆಪತ್ತುಗಳೆರಡನ್ನೂ ಕಂಡವು. ಹೊಸ ಸಾಧ್ಯತೆಗಳಿಗೆ ತೆರೆದುಕೊಂಡ ಉದ್ಯಮಿಗಳು ಅಭೂತಪೂರ್ವ ಎನಿಸುಮಟ್ಟದಲ್ಲಿ ಬೆಳೆದರೆ ಪರಿವರ್ತನೆಗೆ ತಯಾರಿಲ್ಲದವರು ಸೋತರು. 1991ರ ನಂತರದ ಮತ್ತು ಅದಕ್ಕೂ ಹಿಂದಿನ ದೊಡ್ಡ ವಹಿವಾತಿನ ಉದ್ಯಮಿಗಳ ಪಟ್ಟಿಯನ್ನು ನೋಡಿದರೆ ಅನೇಕ ಹಳೆಯ ಹೆಸರುಗಳು ಕಾಣೆಯಾದದ್ದು ಮತ್ತು ಹೊಸ ಹೆಸರುಗಳು ಈ ಪಟ್ಟಿಗೆ ಸೇರಿದ್ದನ್ನು ಕಾಣಬಹುದು.
ಈ ಸ್ಫೋಟದಮಂಥನದಐದು ಪ್ರಮುಖ ಲಕ್ಷಣ ಮತ್ತು ಪ್ರಕ್ರಿಯೆಗಳನ್ನು ನೋಡೋಣ:
ಚೈತನ್ಯ ಮತ್ತು ಗತಿಶೀಲತೆ: 
90ರ ದಶಕದ ಮುಂಚೆ ನಮ್ಮ ಅನೇಕ ದೊಡ್ಡ ಕಂಪನಿಗಳಿಗೆ ದೇಸೀ ಅಥವಾ ವಿದೇಶೀ ಸ್ಪರ್ಧೆ ಇರಲಿಲ್ಲ. ಉನ್ನತ ಆಯಾತ ಕರಗಳ ಮೂಲಕ ಅವರ ಮಾರುಕಟ್ಟೆ ಸುರಕ್ಷಿತವಾಗಿತ್ತು. ಆದ್ದರಿಂದ ಅವರಿಗೆ ಹೊಸ ಆವಿಷ್ಕಾರದ ಅಥವಾ ಉತ್ತಮ ಗುಣಶೀಲತೆಯಗ್ರಾಹಕ ಒಲುಮೆಯಉತ್ಪಾದನಾ ಕ್ಷಮತೆಯ ಮತ್ತು ಅಷ್ಟೇ ಅಲ್ಲ ಸ್ಪರ್ಧಾತ್ಮಕವಾಗಿ ಕಡಿಮೆ ಬೆಲೆಗೆ ಮಾರುವ ಗೋಜೇ ಇರಲಿಲ್ಲ.
ಲೈಸೆನ್ಸ್ ವ್ಯವಸ್ಥೆಯ ಮೂಲಕ ಅನೇಕರು ಏಕಾಧಿಪತ್ಯದ ಸವಿಯನ್ನೂ ಉಣ್ಣುತ್ತಿದ್ದರು. ಹೀಗಾಗಿ 91ರಲ್ಲಿ ಲೈಸೆನ್ಸ್ ವ್ಯವಸ್ಥೆ ಬಹುತೇಕ ಕ್ಷೇತ್ರಗಳಲ್ಲಿ ರದ್ದಾದಾಗ ಮತ್ತು ಆಯಾತ ಕರಗಳು ಕಡಿಮೆಯಾದಾಗ ಅನುಕೂಲ ಮತ್ತು ಆಪತ್ತು ಎರಡೂ ಎದುರಾದವು. ಚೈತನ್ಯಭರಿತರಾಗಿ ಹೊಸ ಸವಾಲುಗಳನ್ನು ಎದುರಿಸಿದವರು ಜಾಗತಿಕ ಸ್ಪರ್ಧೆಗೆ ಸರಿಸಮನಾಗಿ ನಿಂತರು ಅಷ್ಟೇ ಅಲ್ಲದೆ ಸ್ವತಃ ಜಾಗತಿಕ ಮಾರುಕಟ್ಟೆಗಳನ್ನು ವಶಪಡಿಸಿಕೊಳ್ಳಲು ಮುಂದಾದರು. ಅದೇ ಸಮಯ ಹೊಸತನ್ನು ಸ್ವೀಕರಿಸಲು ಆಗದವರು ಸ್ಪರ್ಧಾ ಕಣದಿಂದಲೇ ಹೊರ ಹೋದರು. ಇಂದು ಎಷ್ಟೋ ಸರಕು ಮತ್ತು ಸೇವೆಗಳಲ್ಲಿಹಣಕಾಸು ಮತ್ತು ಉಸ್ತುವಾರಿಯಲ್ಲಿ ಅನೇಕ ಆವಿಷ್ಕಾರ ಇಲ್ಲವೆ ಸುಧಾರಣೆಗಳನ್ನು ಭಾರತೀಯ ಉದ್ದಿಮೆಗಳು ಮಾಡಿವೆ.
ಭಾರತೀಯ ಬಹುರಾಷ್ಟ್ರೀಯ ಕಂಪನಿಗಳು:
ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಹಲವಾರು ಕಂಪನಿಗಳು ಅಲ್ಲಿ ಬಂಡವಾಳವನ್ನು ಹೂಡಿ ಹೊಸ ವ್ಯವಹಾರಗಳನ್ನು ಸ್ಥಾಪಿಸಿವೆ ಇಲ್ಲವೆ ಅಲ್ಲಿಯ ಕಂಪನಿಗಳನ್ನು ಖರೀದಿಸಿವೆ. ಉದಾಹರಣೆಗೆ ಕೇವಲ 2006ರಿಂದ 2010ರ ನಡುವಣ ನಾಲ್ಕು ವರುಷಗಳಲ್ಲಿ ಬ್ರಿಟನ್ನಿನ "ದಿ ಎಕಾನಮಿಸ್ಟ್" ಪತ್ರಿಕೆಯ ಪ್ರಕಾರ ಭಾರತೀಯ ಉದ್ದಿಮೆದಾರರು 7500 ಕೋಟಿ ಡಾಲರ್ ವಿದೇಶದಲ್ಲಿ ತೊಡಗಿಸಿದರು ಮತ್ತು 754 ವಿದೇಶೀ ಕಂಪನಿಗಳನ್ನು ಖರೀದಿಸಿದರು.
ಈ ವಿಷಯವನ್ನು ಆ ಪತ್ರಿಕೆ ಭಾರತೀಯ ಉದ್ದಿಮೆಗಳ ಬಗ್ಗೆ "ಹಸಿದ ಹುಲಿಗಳು" ಎಂಬ ಶೀರ್ಷಿಕೆಯಡಿ ಲೇಖದಲ್ಲಿ ಪ್ರಕಟಿಸಿತ್ತು. ಕಳೆದ ಹಲವಾರು ವರುಷಗಳಿಂದ ಟಿ.ಸಿ.ಎಸ್.ಇನ್ಫೋಸಿಸ್ವಿಪ್ರೋಎಚ್.ಸಿ.ಎಲ್.ಟೆಕ್ ಮಹೀಂದ್ರಾ ಅಲ್ಲದೆ ಅನೇಕ ಐಟಿ ಕಂಪನಿಗಳು ಶೇಕಡಾ 90ಕ್ಕೂ ಹೆಚ್ಚು ಆದಾಯವನ್ನು  ಜಾಗತಿಕ ಮಾರುಕಟ್ಟೆಯಲ್ಲಿ ಗಳಿಸುತ್ತಿವೆ. ಇದಲ್ಲದೆ ಟಾಟಾ ಸಮೂಹಆದಿತ್ಯ ಬಿರ್ಲಾ ಸಮೂಹಎಸ್ಸಾರ್ವೇದಾಂತವಿಡಿಯೋಕಾನ್ಓಎನ್‌ಜಿಸಿಭಾರತಿಜಿಂದಾಲ್ರಿಲಾಯನ್ಸ್ಡಾ ರೆಡ್ಡಿಸನ್ ಫಾರ್ಮಾಎಲ್ ಆಂಡ್ ಟಿಮಹೀಂದ್ರಎಸ್ಸೆಲ್ಸುಜ಼್ಲೊನ್ ಇತ್ಯಾದಿ ಹಲವಾರು ಔದ್ಯೋಗಿಕ ಸಮೂಹಗಳು ವಿದೇಶಗಳಲ್ಲಿ ಬಂಡವಾಳವನ್ನು ಹೂಡಿ ದೊಡ್ಡ ಆದಾಯವನ್ನು ಇದರಿಂದ ಪಡೆಯುತ್ತಿವೆ.
ಇಂಥ ಖರೀದಿಗಳಿಗೆ ಅವರಿಗೆ  ಜಿ.ಡಿ.ಆರ್.ಎ.ಡಿ.ಆರ್.ವಿದೇಶೀ ಮಾರುಕಟ್ಟೆಗಳಲ್ಲಿ ತಮ್ಮ ಶೇರು-ಬಾಂಡ್ ಮಾರಾಟ ಇತ್ಯಾದಿಗಳ ಮೂಲಕ ಸಾಕಷ್ಟು ಬಂಡವಾಳವೂ ದೊರಕಿದೆ. ಇದಲ್ಲದೆ ಕಳೆದ 15 ವರುಷಗಳಲ್ಲಿ  ನೂರಾರು ಸಣ್ಣ ಸ್ಟಾರ್ಟ ಅಪ್‌ಗಳಿಗೂ ಅಮೇರಿಕ ಮತ್ತು ಜಪಾನಿನ ನೂರಾರು ಕೋಟಿ ಡಾಲರ್ ವೆಂಚರ್ ಕ್ಯಾಪಿಟಲ್ ಉಪಲಬ್ಧವಾಗಿದೆ. ಅಂದರೆ 1991ರ ನಂತರ ಭಾರತೀಯ ಉದ್ದಿಮೆಗಳಿಗೆ ಸರಕು-ಸೇವೆಗಳ ಜಾಗತಿಕ ಮಾರುಕಟ್ಟೆ ಅಷ್ಟೇ ಅಲ್ಲದೆ ಬಂಡವಾಳದ ಜಾಗತಿಕ ಮಾರುಕಟ್ಟೆಯೂ ದೊರೆತಿದೆ.
ಗುಣ ಶೀಲತೆಯ ಪ್ರಜ್ಞೆ:
ಕಳೆದ 25 ವರುಷಗಳಲ್ಲಿ ಸಾವಿರಾರು ಭಾರತೀಯ ಕಂಪನಿಗಳು ತಮ್ಮ ಉತ್ಪಾದನೆ ಅಥವಾ ಸೇವೆಯ ಪ್ರಕ್ರಿಯೆಗಳನ್ನು ತೀವ್ರವಾಗಿ ಸುಧಾರಿಸಿವೆ. ಈಗಾಗಲೇ ಐಟಿ ಕ್ಷೇತ್ರದಲ್ಲಿ ಹಲವಾರು ಕಂಪನಿಗಳು ಗುಣಮಟ್ಟದ ಮಾನದಂಡವಾದ  ಸಿ.ಎಮ್.ಎಮ್.ಐ. ಪದ್ಧತಿಯಲ್ಲಿ ಅತ್ಯುನ್ನತ ಮಜಲನ್ನು ಮುಟ್ಟಿವೆ ಮತ್ತು ಜಾಗತಿಕ ಹೆಗ್ಗಳಿಕೆಗೆ ಪಾತ್ರವಾಗಿವೆ. ಇನ್ನುಳಿದ ಔದ್ಯೋಗಿಕ ಕ್ಷೇತ್ರಗಳಲ್ಲೂ ಐ.ಎಸ್.ಓ. ಗುಣಮಟ್ಟದ ಅಳವಡಿಕೆ ಸಾಮಾನ್ಯವಾಗಿದೆ. ಇದಲ್ಲದೆ ಸತತ ಗುಣಶೀಲತೆಯ ಸುಧಾರಣೆಗೆ ಅಸಂಖ್ಯ ಉದ್ದಿಮೆಗಳು ಕೈಜ಼ೆನ್ಸಿಕ್ಸ್ ಸಿಗ್ಮಾಮ್ಯಾಲ್ಕಮ್ ಬಾಲ್ಡ್ರಿಜ್ಟಾಟಾ ಬಿಜಿನೆಸ್ ಎಕ್ಸಲೆನ್ಸ್ ಮಾಡೆಲ್ಟೋಟಲ್ ಪ್ರಿವೆಂಟಿವ್ ಮೆಂಟೇನನ್ಸ್ಟೋಟಲ್ ಕ್ವಾಲಿಟಿ ಮೆಂಟೇನನ್ಸ್ಕ್ವಾಲಿಟಿ ಸರ್ಕಲ್ಜ಼ೀರೋ ಡಿಫ಼ೆಕ್ಟ್ ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿವೆ.
ಜಾಣ ಉತ್ಪಾದನೆಯತ್ತ:
ಇತ್ತೀಚಿನ ಜಪಾನೀ ಆವಿಷ್ಕಾರಗಳಾದ ಸಮಯಕ್ಕೆ ಸರಿಯಾದ ಉತ್ಪಾದನೆ (ಜಸ್ಟ್ ಇನ್ ಟೈಮ್) ಮತ್ತು ವಿಕೇಂದ್ರೀಕೃತ ಉತ್ಪಾದನೆಗಳನ್ನು ಭಾರತೀಯ ಕಂಪನಿಗಳು ವೇಗದಿಂದ ಅಳವಡಿಸಿಕೊಂಡಿವೆ. ಅದರೊಡನೆಯೇ ಜರ್ಮನ್-ಅಮೇರಿಕನ್ ಐಟಿ ಆಧಾರಿತ ಪದ್ಧತಿಯಾದ ಇ.ಆರ್.ಪಿ.ಯನ್ನು ಅಳವಡಿಸಿ ತಮ್ಮ ಉತ್ಪಾದನಾ ಕ್ಷಮತೆಯನ್ನು ವೃದ್ಧಿಸಿವೆ. ಇಂದು ಭಾರತೀಯ ಉತ್ಪಾದನಾ ವ್ಯವಸ್ಥೆ ಚೀನದ ಗಾತ್ರ ಮತ್ತು ಮೊತ್ತವನ್ನು ಮುಟ್ಟಿಲ್ಲವಾದರೂ  ಉನ್ನತ ಮಟ್ಟವನ್ನು ತಲುಪಲು ತಾಂತ್ರಿಕವಾಗಿ ಸಿದ್ಧವಾಗಿದೆ ಎಂದೆನ್ನಬಹುದು.
ಮಿತವ್ಯಯೀ ಎಂಜಿನಿಯರಿಂಗ್:
ಎಂಜಿನಿಯರಿಂಗ್ ವಿನ್ಯಾಸದಲ್ಲಿ ಇಂದು ಭಾರತ ಮಿತವ್ಯಯದ ದೃಷ್ಟಿಕೋನವನ್ನು ತಳಪಾಯವಾಗಿರಿಸಿ ಹೊಸ ದಿಕ್ಕು ತೋರಿಸುತ್ತಿದೆ. ಇದರಿಂದ ಸರಕುಗಳ ಅಂತಿಮ ಬೆಲೆಯಲ್ಲಿ ದೊಡ್ಡ ಇಳಿಕೆ ಸಾಧ್ಯವಾಗಿದೆ. ಫ಼್ರಾನ್ಸ್ ದೇಶದ ರಿನೋ ಮೋಟಾರ್ಸ್ ಮತ್ತು ಜಪಾನಿನ ನಿಸ್ಸಾನ್ ಮೋಟಾರ್ಸ್ ಕಂಪನಿಗಳ ಮುಖ್ಯಸ್ಥರಾದ ಕಾರ್ಲೋಸ್ ಘೌನ್ ಅವರು ಇದನ್ನು  ಮಿತವ್ಯಯೀ ಎಂಜಿನಿಯರಿಂಗ್ ಮಾರ್ಗ ಎಂದು ಹೊಗಳಿದ್ದಾರೆ ಮತ್ತು ಭಾರತದಲ್ಲಿ ತಮ್ಮ ಎಂಜಿನಿಯರಿಂಗ ಅನ್ವೇಷಣಾ ಕೇಂದ್ರಗಳಲ್ಲಿ ಸಾಕಷ್ಟು ಹಣವನ್ನು ತೊಡಗಿಸಿದ್ದಾರೆ. ಟಾಟಾ ಸಮೂಹದ ನ್ಯಾನೋ ಮುಂತಾದವು ಈ ಪ್ರಕ್ರಿಯೆಗೆ ಉದಾಹರಣೆಗಳಾಗಿ ಜಗತ್ತಿನ ಮನ ಸೆಳೆದವು. ಮ್ಯಾನೇಜ್‌ಮೆಂಟ್ ಗುರು ಎಂದು ಹೆಸರಾದ ಅಮೇರಿಕದ ಸಿ.ಕೆ. ಪ್ರಹ್ಲಾದ ಅವರು ಈ ಕ್ರಮಕ್ಕೆ "ಆದಾಯ ಪಿರಾಮಿಡ್ ನ ತಳವನ್ನು ಉದ್ದೇಶಿಸಿದ ಕ್ರಮ" ಎಂದು ಕರೆದರು. ಈ ತಳದಲ್ಲಿ ವಿಶ್ವದ ಸುಮಾರು 500 ಕೋಟಿ ಜನತೆ ಇದೆ ಎಂದು ಅವರ ಲೆಕ್ಕವಾಗಿತ್ತು.
ಇದೊಂದು ಕಳೆದ 25 ವರುಷ ಭಾರತೀಯ ಉದ್ದಿಮೆ ಪಯಣಿಸಿದ ಪಥದ ಹಕ್ಕಿ ನೋಟ. ಇಷ್ಟೆಲ್ಲ ಪ್ರಗತಿ ಸ್ವಲ್ಪ ಸಮಯದಲ್ಲೇ ಉದಾರೀಕರಣ ಮತ್ತು ಜಾಗತೀಕರಣಗಳ ಮೂಲಕ ಆಯಿತೆಂದರೆ ಇದಕ್ಕೂ ಮೊದಲೇ ಭಾರತೀಯ ಉದ್ದಿಮೆಗಳು ಈ ಹಾದಿಯಲ್ಲಿ ಏಕೆ ನಡೆಯಲಿಲ್ಲ ಎಂಬ ಪ್ರಶ್ನೆ ಸಹಜ. ಇದಕ್ಕೆ ಉತ್ತರವನ್ನು ಹುಡುಕಲು ಸ್ವತಂತ್ರ ಭಾರತದ ರಾಜಕೀಯ ಅರ್ಥಶಾಸ್ತ್ರವನ್ನು ಅರ್ಥೈಸುವದು ಅಗತ್ಯ. ಅದನ್ನು ಮತ್ತೊಮ್ಮೆ ಮಾಡಬಹುದು.

(ಲೇಖಕ ಶಿವಾನಂದ ಕಣವಿಯವರು ಭಾರತದ ಮೊದಲ ವಾಣಿಜ್ಯ ನಿಯತಕಾಲಿಕ ಬಿಜಿನೆಸ್ ಇಂಡಿಯಾದ ಕಾರ್ಯವಾಹಕ ಸಂಪಾದಕರಾಗಿದ್ದವರು. ನಂತರ ಟಿಸಿಎಸ್‌ನ ಉಪಾಧ್ಯಕ್ಷರಾಗಿದ್ದರು. ಸದ್ಯ ನಿಯಾಸ್ನಲ್ಲಿ ಪ್ರೊಫೆಸರ್)